ವೆಂಕಟರಾವ್, ತಲಗೇರಿ
	?-1978. ಕನ್ನಡ ರಂಗಭೂಮಿಯ ಹವ್ಯಾಸಿ ಕಲಾವಿದ, ಚಿತ್ರನಟ. ಇವರು ಶಿವಮೊಗ್ಗ ಜಿಲ್ಲೆಯ ಹುಲಿಯೂರು ದುರ್ಗದಲ್ಲಿ ಹುಟ್ಟಿದರು. ತಂದೆ ಸುಬ್ಬರಾವ್ ಯಕ್ಷಗಾನ ಕಲಾವಿದರಾಗಿದ್ದರು. ಹಳ್ಳಿಗೆ ಬರುತ್ತಿದ್ದ ಕಂಪನಿ ನಾಟಕಗಳನ್ನೆಲ್ಲ ನೋಡುತ್ತಿದ್ದ ವೆಂಕಟರಾಯರಿಗೆ ಚಿಕ್ಕಂದಿನಲ್ಲೇ ಈ ಕಲೆಯಲ್ಲಿ ವಿಶೇಷವಾದ ಅಭಿರುಚಿ ಮೂಡಿತು. ತಮ್ಮ ಹದಿನಾರನೆಯ ವಯಸ್ಸಿನಲ್ಲಿ, ಇನ್ನೂ ವಿದ್ಯಾರ್ಥಿಯಾಗಿದ್ದಾಗ, ಸಾಗರದಲ್ಲಿ ನಾಟಕವೊಂದರಲ್ಲಿ ಇವರು ಸ್ತ್ರೀಪಾತ್ರವೊಂದನ್ನು ನಿರ್ವಹಿಸಿದರು.
	ನೌಕರಿ ಪಡೆಯುವ ಉದ್ದೇಶದಿಂದ ಮುಂಬಯಿಗೆ ಹೋಗಿ ನೆಲಸಿದ ಇವರಿಗೆ ನಾಟಕದಲ್ಲಿ ಆಸಕ್ತಿ ಬೆಳೆಯುತ್ತಲೇ ಇತ್ತು. ಅಲ್ಲಿಯ ಗಣೇಶೋತ್ಸವದ ಸಂದರ್ಭದಲ್ಲಿ ರಾಮಪಟ್ಟಾಭಿಷೇಕ ಎಂಬ ಮರಾಠಿ ನಾಟಕದಲ್ಲಿ ಸಣ್ಣ ಪಾತ್ರವೊಂದು ಇವರಿಗೆ ದೊರಕಿತು. ಕ್ರಮೇಣ ಇವರು ನಾಟಕಗಳಲ್ಲಿ ಹೆಚ್ಚು ಅಭಿನಯಿಸತೊಡಗಿದರು. ಗೆಳೆಯರೊಂದಿಗೆ ಕೂಡಿ ಸರಸ್ವತಿ ಅಮೆಚೂರ್ಸ್ ಎಂಬ ಹವ್ಯಾಸಿ ನಾಟಕ ಕಲಾವಿದರ ಸಂಘವನ್ನು ಸ್ಥಾಪಿಸಿದರು.  ಕಾಲ ಸಂದಂತೆ ಇವರ ಕಲಾವಂತಿಕೆ ಅನೇಕರ ಲಕ್ಷ್ಯ ಸೆಳೆಯಿತು. ಕೀಚಕ, ಸಂಸಾರ ನೌಕ ಮುಂತಾದ ನಾಟಕಗಳಲ್ಲಿ ಇವರ ಅಭಿನಯ ಮೆಚ್ಚುವಂತಿತ್ತು. ಎಸ್.ಎಲ್. ಭೈರಪ್ಪನವರ ನಾಯಿ ನೆರಳು ಕಾದಂಬರಿಯನ್ನು ರಂಗಭೂಮಿಗೆ ಅಳವಡಿಸಿದರು. ಇದು ವಿಶೇಷ ಪ್ರಶಂಸೆಗಳಿಸಿತು. ಇವರ ಕೊಂಕಣಿ ಭಾಷೆಯ ಹರಿಶ್ಚಂದ್ರ ಎಂಬ ರೇಡಿಯೋ ನಾಟಕಕ್ಕೆ ಬಹುಮಾನ ಲಭಿಸಿದೆ. ಎಸ್.ಎಲ್. ಭೈರಪ್ಪನವರ ವಂಶವೃಕ್ಷ ಕಾದಂಬರಿಯನ್ನು ಆಧರಿಸಿ ನಿರ್ಮಿಸಲಾದ ಚಲನಚಿತ್ರದಲ್ಲಿ ಇವರು ಪ್ರಧಾನಪಾತ್ರ ವಹಿಸಿ (ಶ್ರೀನಿವಾಸ ಶ್ರೋತ್ರಿ) ಉತ್ತಮ ನಟರೆಂದು ಖ್ಯಾತಿ ಗಳಿಸಿದರು. ಈ ಚಿತ್ರಕ್ಕೆ ವರ್ಷದ ರಾಜ್ಯಮಟ್ಟದ (1971-72) ಅತ್ಯುತ್ತಮ ಚಿತ್ರವೆಂದೂ ಇವರಿಗೆ ಅತ್ಯುತ್ತಮ ನಟನೆಂದೂ ಕೇಂದ್ರ ಪ್ರಶಸ್ತಿಗಳು ದೊರಕಿದುವು. ಈ ಚಿತ್ರದಲ್ಲಿ ಇವರು ತುಂಬ ಅರಿವಿನಿಂದ ಕೂಡಿದ ಹಿತಮಿತ ಅಭಿನಯ ನೀಡಿದ್ದಾರೆ. ಇವರು ಬೂತಯ್ಯನ ಮಗ ಅಯ್ಯು, ಉಪಾಸನೆ, ಆಶೀರ್ವಾದ ಚಿತ್ರಗಳಲ್ಲೂ ಅಭಿನಯಿಸಿದ್ದರು. ಇವರು 1978ರಲ್ಲಿ ನಿಧನರಾದರು.					
	(ಎಚ್.ಎಸ್.ಕೆ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ